ಕೇಂದ್ರ ಸರ್ಕಾರಿ ನೌಕರರಿಗೆ ತಮ್ಮ ವಯಸ್ಸಾದ ಪೋಷಕರ ಆರೈಕೆಗಾಗಿ 30 ದಿನಗಳ ರಜೆಯನ್ನು ಪಡೆಯಲು ಅವಕಾಶವಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಈ ರಜೆಯನ್ನು ವೈಯಕ್ತಿಕ ಕಾರಣಗಳಿಗಾಗಿ, ವಿಶೇಷವಾಗಿ ಪೋಷಕರ ಆರೈಕೆಗಾಗಿ ಬಳಸಬಹುದಾಗಿದೆ ಎಂದು ತಿಳಿಸಿದರು.
ಕೇಂದ್ರ ಸಿವಿಲ್ ಸೇವೆ ನಿಯಮಗಳ ಅಡಿಯಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ಪ್ರತಿ ವರ್ಷದಂತೆ 30 ದಿನಗಳ ಅರ್ಜಿತ ರಜೆ, 20 ದಿನಗಳ ಅರ್ಧ ವೇತನ ರಜೆ, 8 ದಿನಗಳ ಆಕಸ್ಮಿಕ ರಜೆ ಮತ್ತು 2 ದಿನಗಳ ನಿರ್ಬಂಧಿತ ರಜೆ ಸೇರಿದಂತೆ ಇತರ ಅರ್ಹ ರಜೆಗಳನ್ನು ಪಡೆಯಬಹುದು. ಈ ರಜೆಗಳನ್ನು ಯಾವುದೇ ವೈಯಕ್ತಿಕ ಕಾರಣಕ್ಕಾಗಿ, ವಿಶೇಷವಾಗಿ ವಯಸ್ಸಾದ ಪೋಷಕರ ಆರೈಕೆಗಾಗಿ ಬಳಸಿಕೊಳ್ಳಬಹುದು ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಒಬ್ಬ ಸದಸ್ಯರು ಕೇಂದ್ರ ಸರ್ಕಾರದ ನೌಕರರಿಗೆ ತಮ್ಮ ವಯಸ್ಸಾದ ಪೋಷಕರ ಆರೈಕೆಗಾಗಿ ರಜೆ ಪಡೆಯಲು ಯಾವುದೇ ನಿಯಮಗಳು ಇಲ್ಲವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಜಿತೇಂದ್ರ ಸಿಂಗ್, ಈ ರಜೆಯ ನಿಯಮಗಳು 1972ರಿಂದಲೇ ಜಾರಿಯಲ್ಲಿದ್ದು, ನೌಕರರಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
