ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಇತ್ತೀಚಿಗೆ ಬದಲಾದ ಹವಾಮಾನ ವೈಪರೀತ್ಯಗಳು ಮತ್ತು ಚಂಡಮಾರುತ ಪ್ರಸರಣದಿಂದಾಗಿ ದಿನನಿತ್ಯ ಮಳೆ ಆಗುತ್ತಿದೆ. ಇನ್ನೂ ಕೆಲವೆಡೆ ಭರ್ಜರಿ ಮಳೆ ಮುನ್ಸೂಚನೆ ಇದೆ. ಮುಂದಿನ 3 ರಿಂದ 5 ರವರೆಗೆ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಿಗೆ ಜೋರು ಬಿರುಗಾಳಿ ಸಹಿತ ಅತ್ಯಧಿಕ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆಯು 'ಆರೆಂಜ್ ಅಲರ್ಟ್' ಮತ್ತು ಯೆಲ್ಲೋ ಅಲರ್ಟ್' ಘೋಷಿಸಿದೆ.
ಹವಾಮಾನ ತಜ್ಞರ ಪ್ರಕಾರ, ಚಂಡಮಾರುತ ಪ್ರಸರಣದ ಕಾರಣದಿಂದ ಮುಂಗಾರು ಮಳೆ ಆರ್ಭಟಿಸುತ್ತಿದೆ.
ರಾಜ್ಯದಲ್ಲಿ ಮುಂಗಾರು ಆರಂಭವಾದಾಗಿನಿಂದ ರಾಜ್ಯದ ಮಲೆನಾಡಿನಲ್ಲಿ ನದಿಗಳು, ಹಳ್ಳಗಳು ಮತ್ತು ಕೆರೆಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತಗೊಂಡಿದ್ದು, ಈ ಭಾಗದ ಜನರ ಸ್ಥಿತಿ ಅಕ್ಷರಶಃ ನಲುಗಿದೆ. ಬಿಟ್ಟು ಬಿಡದೇ ಮಳೆ ಆಗುತ್ತಿದೆ. ಭಾಗಮಂಗಲ, ತಲಕಾವೇರಿ ಸೇರಿದಂತೆ ಮಡಿಕೇರಿ, ಕೊಡಗು ಭಾಗದಲ್ಲಿ ವ್ಯಾಪಕ ಮಳೆ ಮುಂದುವರಿದಿದೆ. ಸಮುದ್ರ ಮೇಲ್ಮೈನಲ್ಲಿ ಎದ್ದ ಸ್ಟ್ರಫ್ ಕಾರಣದಿಂದ ಭಾರೀ ಮಳೆ ಆಗುತ್ತಿದೆ. ಮುಂದಿನ ಮೂರು ದಿನ ಏಳು ಜಿಲ್ಲೆಗಳಿಗೆ ಭಾರೀ ಮಳೆ ನಿರೀಕ್ಷೆ ಇದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸುವ ನಿರೀಕ್ಷೆ ಇದೆ.
ರಾಜ್ಯದಲ್ಲಿ 3 ದಿನ ಆರೇಂಜ್ ಅಲರ್ಟ್
ರಾಜ್ಯದ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗಗಳಲ್ಲಿ ಭಾರೀ ಮಳೆ ಆಗಲಿದ್ದು, 30ರವರೆಗೆ ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಮಾಡಲಾಗಿದೆ. ನಂತರ ಕೊಂಚ ಮಳೆ ಪ್ರಭಾವ ತಗ್ಗಲಿದ್ದು, ಎರಡು ದಿನ ಅಂದರೆ ಆಗಸ್ಟ್ 01ರವರೆಗೆ 'ಯೆಲ್ಲೋ ಅಲರ್ಟ್' ಮಾಡಲಾಗಿದೆ. ಇಂದು ಮತ್ತು ನಾಳೆ ಎರಡು ದಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರಣಭೀಕರ ಮಳೆ ಮುಂದುವರಿಯಲಿದೆ. ಗಾಳಿ ಪ್ರಮಾಣ ಜೋರಾಗಿರಲಿದ್ದು, 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಸೋಮವಾರದ IMD ಕರ್ನಾಟಕ ಕೇಂದ್ರ ಮುನ್ಸೂಚನೆ ಕೊಟ್ಟಿದೆ.
ಈ ವಾತಾವರಣಕ್ಕೆ ಆರೋಗ್ಯದಲ್ಲಿ ಏರುಪೇರು
ರಾಜ್ಯದಲ್ಲಿ ಹಲವು ದಿನಗಳಿಂದ ಉತ್ತರ ಕರ್ನಾಟಕದಾದ್ಯಂತ ಭಾರೀ ಮಳೆ ಇಲ್ಲದಿದ್ದರೂ ಸಹಿತ ಜಿಟಿ ಜಿಟಿ ಮಳೆ ಮುಂದುವರಿದಿದೆ. ದಿನಪೂರ್ತಿ ಮಬ್ಬು ವಾತಾವರಣ ಉಂಟಾಗಿದೆ. ಬಿಸಿಲಿನ ದರ್ಶನವೇ ಇಲ್ಲದಾಗಿದೆ. ಇದರಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಜ್ವರ, ಕೆಮ್ಮು ಮತ್ತು ನೆಗಡಿ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದೆ. ವೃದ್ಧರಿಗೆ, ಗರ್ಭಿಣಿಯರಿಗೆ ಮತ್ತು ಮಕ್ಕಳ ಆರೋಗ್ಯ ಈ ವಾತಾವರಣದಿಂದ ಹದಗೆಡುತ್ತಿದೆ.
ರಾಜ್ಯದ ಒಳನಾಡು ಭಾಗದಲ್ಲಿ ಭಾರೀ ಚಳಿ, ಜಡಿಮಳೆ
ಇನ್ನೂ ರಾಜ್ಯದ ದಾವಣಗೆರೆ, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಚಿತ್ರದುರ್ಗದಲ್ಲಿ ಆಗಾಗ ಹಗುರದಿಂದ ಸಾಧಾರಣ ಮಳೆ ದಾಖಲಾಗಿದೆ. ಬೆಂಗಳೂರು ಸೇರಿದಂತೆ ಒಳನಾಡು ಜಿಲ್ಲೆಗಳು, ಉತ್ತರ ಕರ್ನಾಟಕದ ಭಾಗಗಳಲ್ಲಿ ಚಳಿ ಮುಂದುವರಿದಿದೆ.
ಅರಬ್ಬಿ ಸಮುದ್ರ ಹಾಗೂ ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಬಂಗಾಳಕೊಲ್ಲಿ ಭಾಗದಲ್ಲಿ ಚಂಡಮಾರುತ ಪ್ರಸರಣ ಮುಂದುವರಿದಿದೆ. ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಸ್ಟ್ರಫ್ ಸೃಷ್ಟಿಯಾಗಿದ್ದು, ಗಾಳಿ ಬೀಸುವಿಕೆ ಜೋರಾಗಿದೆ. ಹೀಗಾಗಿ ರಾಜ್ಯದ ನಾನಾ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯ ವಾತಾವರಣ ಕಂಡು ಬಂದಿದೆ. ಇನ್ನು ಕೆಲವು ದಿನಗಳ ಕಾಲ ಇದೇ ರೀತಿಯ ಚಳಿ, ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
