ಕನ್ನಡ ನ್ಯೂಸ್ 24:-
ರಾಜ್ಯದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪಿಗೆ ಕರ್ನಾಟಕದ ಹಲವು ಶಾಲಾ ಶಿಕ್ಷಕರು, ಶಿಕ್ಷಣ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿತ್ತು.
ಬಡ್ತಿ ಹಾಗೂ ಸೇವೆ ಮುಂದುವರಿಕೆಗೆ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿತ್ತು.
ಅಲ್ಲದೇ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿತ್ತು.
ಈಗ ಕರ್ನಾಟಕ ಸರ್ಕಾರ ರಾಜ್ಯದ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ಈ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಮಾಹಿತಿಯನ್ನು ನೀಡಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಸಚಿವ ಎಚ್.ಕೆ.ಪಾಟೀಲ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸಂಘ ಧನ್ಯವಾದಗಳನ್ನು ತಿಳಿಸಿದೆ.
ರಾಜ್ಯ ಸರ್ಕಾರದಿಂದ ಕಾನೂನು ಹೋರಾಟ:-
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಪರವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ ಎಚ್ ಎಸ್, ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದಾರೆ.
ದಿನಾಂಕ 04-09-2025ರ ಸಚಿವ ಸಂಪುಟದ ತೀರ್ಮಾನದಂತೆ TET ಕಡ್ಡಾಯಗೊಳಿಸಿದ್ದರ ಕುರಿತು ಮರುಪರಿಶೀಲನಾ ಅರ್ಜಿ ಸಲ್ಲಿಸಲು ಕಾನೂನು ಇಲಾಖೆಯಿಂದ ಅನುಮೋದನೆ ಕಡತ ಇಂದು ಶಿಕ್ಷಣ ಇಲಾಖೆಗೆ ಸಲ್ಲಿಕೆ. ದಿನಾಂಕ 04-09-2025ರ ಸಚಿವ ಸಂಪುಟದ ತೀರ್ಮಾನದಂತೆ ರಾಜ್ಯದ ಶಿಕ್ಷಕರಿಗೆ ಟಿಇಟಿಯನ್ನು ಕಡ್ಡಾಯಗೊಳಿಸುವುದರ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿತ್ತು.
ಅದಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆ ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಅನುಮೋದನೆ ನೀಡಿದ ಕಾರಣ ಈ ಕಾರಣಕ್ಕಾಗಿ ರಾಜ್ಯದ ಸಮಸ್ತ ಶಿಕ್ಷಕರಿಗಾದ ಅನ್ಯಾಯದ ಪರವಾಗಿ ಸರ್ಕಾರವೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿ, ಭದ್ರತೆಯನ್ನು ಒದಗಿಸುವ ಐತಿಹಾಸಿಕ ತೀರ್ಮಾನವಾಗಿದೆ.
ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರಿಗೆ, ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರವರಿಗೆ, ಕಾನೂನು ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲರವರಿಗೆ, ಶಾಲಾ ಶಿಕ್ಷಣ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪರವರಿಗೆ, ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಅನಂತ ಅನಂತ ಧನ್ಯವಾದಗಳು ಎಂದು ಸಂಘ ಹೇಳಿದೆ.
ಸೇವಾ ನಿರತ ಶಾಲಾ ಶಿಕ್ಷಕರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಚರ್ಚೆಗಳು ಪ್ರಾರಂಭವಾಗಿತ್ತು. ಯಾವುದೇ ಕಾನೂನನ್ನು ಪೂರ್ವಾನ್ವಯವಾಗಿ ಜಾರಿಗೊಳಿಸುವುದು ಸಂವಿಧಾನ ಮತ್ತು ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಎನ್‌ಸಿಟಿಇ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಜಾರಿಗೊಳಿಸುವ ಮುನ್ನವೇ ಸೇವೆಗೆ ಸೇರಿರುವ, ಸೇವಾ ಜ್ಯೇಷ್ಠತೆ ಆಧಾರದಲ್ಲಿ ಪದೋನ್ನತಿ ಬಯಸುವ ಶಿಕ್ಷಕರಿಗೆ ಇದನ್ನು ಕಡ್ಡಾಯಗೊಳಿಸುವುದು ಅನ್ಯಾಯವಾಗುತ್ತದೆ ಎಂದು ಸರ್ಕಾರದ ಗಮನ ಸೆಳೆಯಲಾಗಿತ್ತು.
ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯ ಎಂಬುದು ಸೇವಾ ನಿರತ ಶಿಕ್ಷಕರಿಗೆ ಪೂರ್ವಾನ್ವಯ ಮಾಡಬಾರದು ಎನ್ನುವ ತೀರ್ಮಾನವನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಈಗಾಗಲೇ ಶಿಕ್ಷಕರ ಕೊರತೆ ಇದೆ. ಸುಪ್ರೀಂಕೋರ್ಟ್ ತೀರ್ಪು ಪಾಲನೆ ಮಾಡಿದರೆ 1.68 ಲಕ್ಷ ಶಿಕ್ಷಕರ ಮೇಲೆ ಅದು ಪರಿಣಾಮ ಬೀರಲಿದೆ ಎಂದು ಚರ್ಚೆಯಾಗಿತ್ತು.
ತರಬೇತಿ ಪಡೆದ ಮತ್ತು ಶಿಕ್ಷಕರಾಗಲು ಸೇವಾ ಪೂರ್ವ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಈಗ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸುವುದು ಎಷ್ಟು ಸರಿ? ಎಂದು ಸರ್ಕಾರವನ್ನು ಪ್ರಶ್ನಿಸಲಾಗಿತ್ತು. ಹಲವು ವರ್ಷಗಳಿಂದ ಈ ವೃತ್ತಿಯಲ್ಲಿರುವವರ ಹಿತಾಸಕ್ತಿಗೆ ಇದು ಧಕ್ಕೆ ಉಂಟು ಮಾಡುತ್ತದೆ ಎಂದು ಸರ್ಕಾರದ ಗಮನ ಸೆಳೆಯಲಾಗಿತ್ತು.
